ಕಸ್ತೂರಬಾ ರಸ್ತೆಯಲ್ಲಿರುವ ಕಸದ ರಾಶಿ ಸಮಸ್ಯೆಗೆ ಮುಕ್ತಿ ಎಂದು ?


 ಶಿವಮೊಗ್ಗ ನಗರದ ಗಾಂಧಿಬಜಾರ್‌ಗೆ ಹೊಂದಿಕೊಂಡಂತೆ ಇರುವ ಕಸ್ತೂರಬಾ ರಸ್ತೆಯಲ್ಲಿ ಕಸದ ರಾಶಿ ಮತ್ತು ಟ್ರಾಫಿಕ್ ಕಿರಿಕಿರಿ ನೋಡಿದರೆ ಶಿವಮೊಗ್ಗ ಜನತೆ ಸ್ಮಾರ್ಟ್ ಸಿಟಿ ಕನಸು ಕಾಣುವುದನ್ನು ಮರೆತು ಬಿಡಬೇಕು.
 ನಗರದ ಮುಖ್ಯ ಭಾಗದಲ್ಲಿರುವ ಈ ಬೀದಿ, ಸಮಸ್ಯೆಗಳನ್ನೇ ತುಂಬಿಕೊಂಡಿದೆ. ಈ ಸಮಸ್ಯೆಗಳ ಬಗ್ಗೆ ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿಕೊಂಡರು ಶಾಶ್ವತ ಪರಿಹಾರ ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ. ಮಹಾನಗರ ಪಾಲಿಕೆ ಆಯುಕ್ತರು ಇತ್ತ ಕಡೆ ಗಮನಿಸಿ ಈ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕಾಗಿ ವಿನಂತಿಸುತ್ತೇವೆ.
ಈ ಕಸದ ರಾಶಿಯಿಂದ ಸುತ್ತಮುತ್ತ ಇರುವ ಮನೆಗಳು ಮತ್ತು ಅಂಗಡಿಗಳಿಗೆ ತುಂಬಾ ಹಿಂಸೆಯಾಗಿದ್ದು, ಇಲ್ಲಿ ಕೊಳೆತ ಹಣ್ಣುಗಳು, ಕಬ್ಬು ಹಿಂಡಿದ ಸಿಪ್ಪೆಗಳು, ಒಡೆದ ಗಾಜುಗಳು, ಅಂಗಡಿಗಳಿಂದ ತಂದು ಬಿಸಾಡಿದ ಕಸದ ರಾಶಿಗಳು, ಅದನ್ನು ತಿನ್ನಲು ಬರುವ ದನಗಳು, ನಾಯಿಗಳು, ಇದು ದಿನ ನಿತ್ಯದ ಸಮಸ್ಯೆಗಳು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆಗಳ ಮತ್ತು ನೊಣಗಳ ಹಾವಳಿಯಿಂದ ಮನೆಯಲ್ಲಿ ಮತ್ತು ಅಂಗಡಿಗಳಲ್ಲಿ ಇರುವವರಿಗೆ ರೋಗಗಳು ಬರುವುದು ಗ್ಯಾರೆಂಟಿ.
ಟ್ರಾಫಿಕ್ ಕಿರಿಕಿರಿ :

ಗಾಂಧಿ ಬಜಾರ್‌ಗೆ ಹೋಗುವ ಸಾರ್ವಜನಿಕರು ತಮ್ಮ ವಾಹನವನ್ನು ಈ ಸ್ಥಳದಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವುದರಿಂದ ಮತ್ತು ಗೂಡ್ಸ್ ಗಾಡಿಗಳು, ಆಟೋಗಳು, ಎತ್ತಿನ ಗಾಡಿಗಳು ನಿತ್ಯ ಓಡಾಡುವರಿಗೆ ಕಿರಿಕಿರಿ ಉಂಟಾಗುತ್ತಿದೆ. ಇಲ್ಲಿ ದೊಡ್ಡ ಉದ್ಯಾನವನವಿದ್ದರೂ ಈ ಕಸದ ರಾಶಿಯ ವಾಸನೆ ಮುಂದೆ ಕಾಣದಂತಾಗಿದೆ. ಈ ಉದ್ಯಾನವನದಲ್ಲಿರುವ ಐ ಮಾಸ್ ಲೈಟ್ ಕಂಬ ಮಾತ್ರ ಕಾಣುತ್ತಿದ್ದು, ಲೈಟ್ ಹತ್ತುವುದು ಕಾಣುವುದಿಲ್ಲ.
ಬೋರ್‌ವೆಲ್ ಕೆಟ್ಟು ತುಂಬಾ ದಿನಗಳಾದರೂ ರಿಪೇರಿ ಮಾಡುವ ಮನಸ್ಸು ಮಾತ್ರ ಮಾಡಿಲ್ಲ. ಬೋರ್‌ವೆಲ್ ಸುತ್ತ ಕಸದ ರಾಶಿ ಕೊಳೆತು ನಾರುತ್ತಿದೆ. ಇನ್ನಾದರೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು ಇಲ್ಲವಾದಲ್ಲಿ ತೀವ್ರ ಹೋರಾಟ ಪ್ರಾರಂಭಿಸಬೇಕಾಗುತ್ತದೆ.

ಗಣೇಶ್ ಬಿಳಿಗಿ & myshivamogga.blogspot.com
ನೊಂದ ನಿವಾಸಿಗಳ ಪರವಾಗಿ
ಕಸ್ತೂರಬಾ ರಸ್ತೆ,
ಶಿವಮೊಗ್ಗ

Comments