ಅಸ್ಸಾಂನ ಅಥ್ಲೀಟ್ ಹಿಮಾ ಸಾಧನೆ ಹೊಗಳಿದ, ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ


ನವದೆಹಲಿ, ಜುಲೈ 14: ಐಎಎಎಫ್ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 400 ಮೀಟರ್ ಓಟದಲ್ಲಿ ಚಿನ್ನದ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ಹಿಮಾ ದಾಸ್ ಅವರ ದೇಶಭಕ್ತಿಯ ಭಾವ ತಮ್ಮ ಹೃದಯ ಸ್ಪರ್ಶಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುರುವಾರ ನಡೆದ ಫೈನಲ್‌ನಲ್ಲಿ 400 ಮೀಟರ್‌ ದೂರವನ್ನು 51.46 ಸೆಕೆಂಡ್‌ಗಳಲ್ಲಿ ತಲುಪಿ ಜೊಸ ಟ್ರ್ಯಾಕ್ ಇವೆಂಟ್ ದಾಖಲೆ ಬರೆದ ಹಿಮಾ, ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡಿದ್ದಾರೆ.

ಅಸ್ಸಾಂನ ಅಥ್ಲೀಟ್ ಹಿಮಾ ಸಾಧನೆ ಹೊಗಳಿದ ಪ್ರಧಾನಿ ಮೋದಿ!
ಹಿಮಾ ಅವರ ಸಾಧನೆಗೆ ದೇಶದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲಿಯೂ ಹಿಮಾ ರಾಷ್ಟ್ರಗೀತೆ ಕೇಳುವಾಗ ಭಾವುಕರಾಗಿ ಕಣ್ಣೀರಿಟ್ಟ ವಿಡಿಯೋ ಹಾಗೂ ಚಿತ್ರಗಳು ವ್ಯಾಪಕವಾಗಿ ಶೇರ್ ಆಗುತ್ತಿವೆ.

ಹಿಮಾ ಸಾಧನೆಯನ್ನು ಶ್ಲಾಘಿಸಿ ಶುಕ್ರವಾರ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಶನಿವಾರ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಹೃದಯಸ್ಪರ್ಶಿ ನಡೆ
'ಹಿಮಾ ದಾಸ್ ಗೆಲುವು ಅವಿಸ್ಮರಣೀಯ ಗಳಿಗೆ. ಗೆದ್ದ ಬಳಿಕ ತ್ರಿವರ್ಣ ಧ್ವಜಕ್ಕಾಗಿ ಅವರು ಹುಡುಕಿದ ಅವರ ಪ್ರೀತಿ ಮತ್ತು ರಾಷ್ಟ್ರಗೀತೆ ಹಾಡುವಾಗ ಭಾವುಕರಾದದ್ದು ನನ್ನನ್ನು ತೀವ್ರವಾಗಿ ಸ್ಪರ್ಶಿಸಿತು.

ಇದನ್ನು ನೋಡಿದರೆ ಯಾವ ಭಾರತೀಯನಲ್ಲಿ ಆನಂದಬಾಷ್ಪ ಬಾರದೆ ಇರುತ್ತದೆ ಎಂದು ಟ್ವಿಟ್ಟರ್‌ನಲ್ಲಿ ವಿಡಿಯೋದೊಂದಿಗೆ ತಮ್ಮ ಪ್ರಶಂಸೆಯನ್ನು ಮೋದಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಗೀತೆ ಕೇಳಿ ಭಾವುಕಳಾದೆ: ಚಿನ್ನ ಗೆದ್ದ ಹಿಮಾ ದಾಸ್
ಒಂದು ಹೆಜ್ಜೆ ಮುಂದೆ ಕೊಂಡೊಯ್ಯುವೆ
ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದ ಭಾರತದ ಮೊದಲ ಮಹಿಳೆ ಎಂಬ ಹೆಮ್ಮೆಗೆ ಪಾತ್ರರಾದ ಹಿಮಾ, ತಮಗೆ ಅಭಿನಂದನೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.


ಟ್ವಿಟ್ಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಹಿಮಾ, 'ನನ್ನನ್ನು ಅಭಿನಂದಿಸಿದ ರಾಷ್ಟ್ರಪತಿ, ಪ್ರಧಾನಿ, ಕ್ರೀಡಾ ಸಚಿವರು, ಸಿನಿಮಾ ಉದ್ಯಮ ಮತ್ತು ಎಲ್ಲರಿಗೂ ಕೃತಜ್ಞತೆಗಳು.
ಅವರೆಲ್ಲರೂ ತುಂಬಾ ಪ್ರೀತಿ ಮತ್ತು ಆಶೀರ್ವಾದ ಹರಿಸಿದ್ದಾರೆ. ಅವರೆಲ್ಲರ ಆಶೀರ್ವಾದದಿಂದಾಗಿ ನಾನು ಈ ಹಂತಕ್ಕೆ ಬೆಳೆದಿದ್ದೇನೆ. ನಿಮ್ಮ ಆಶೀರ್ವಾದ ಹೀಗೆಯೇ ನನ್ನ ಮೇಲೆ ಇರಲಿ. ಭಾರತವನ್ನು ನಾನು ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯುತ್ತೇನೆ' ಎಂದು ಹೇಳಿದ್ದಾರೆ.
ಕಠಿಣ ಪರಿಶ್ರಮಕ್ಕೆ ಬೆಲೆ
ಹಲವು ವರ್ಷಗಳ ಕಠಿಣ ಪರಿಶ್ರಮಕ್ಕೆ ದೊರೆತ ಫಲವಿದು ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿಶ್ವ ಅಂಡರ್ 20 ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿರುವುದಕ್ಕೆ ಅಭಿನಂದನೆಗಳು. ಇದು ಹೊಸ ಯುಗದ ಆರಂಭವಷ್ಟೇ. ಕಠಿಣ ಶ್ರಮವನ್ನು ಮುಂದುವರಿಸಿ ಎಂದು ಸಚಿನ್ ಹೇಳಿದ್ದಾರೆ.
ಹೆಮ್ಮೆ ಪಡುತ್ತೇವೆ: #ಕೊಹ್ಲಿ
ಹಿಮಾ ದಾಸ್ ಅವರಿಂದ ನಂಬಲಸಾಧ್ಯವಾದ ಸಾಧನೆ. ವಿಶ್ವ ಅಂಡರ್ 20 ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ 400 ಮೀಟರ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಪಟು. ನಿಮ್ಮ ಬಗ್ಗೆ ದೇಶ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
#ವೆಂಕಯ್ಯ ನಾಯ್ಡು ಪ್ರಶಂಸೆ
ಫಿನ್ಲೆಂಡ್‌ನ ಟಂಪೇರ್‌ನಲ್ಲಿ ಐಎಎಎಫ್ ಅಂಡರ್ 20 ಚಾಂಪಿಯನ್‌ಶಿಪ್‌ನ 400 ಮೀಟರ್ ವಿಭಾಗದಲ್ಲಿ ಚಿನ್ನ ಗೆದ್ದ ಹಿಮಾ ದಾಸ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಅವರು ನಾವೆಲ್ಲರೂ ಹೆಮ್ಮೆ ಪಟ್ಟುಕೊಳ್ಳುವಂತೆ ಮಾಡಿದ್ದಾರೆ. ಅವರ ಗೆಲುವು ಅನೇಕ ಯುವ ಜನರಿಗೆ ಪ್ರೇರಣೆಯಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

Comments